Sunday, April 19, 2015

ಪುಸ್ತಕ ಪರಿಚಯ: ಅಮ್ಮ ಸಿಕ್ಕಿದ್ಲು (ರವಿ ಬೆಳಗೆರೆ)

ಈ ಕಥಾ ವಸ್ತುವಿನ ಪ್ರಮುಖ ಪಾತ್ರ ರವಿ ಬೆಳಗೆರೆ. (ಈ  ಕಾದಂಬರಿ ಕಾಲ್ಪನಿಕವಾದರೂ, ನಿಜ ಜೀವನದ ನಾಮಧೇಯಗಳನ್ನು ಉಪಯೋಗಿಸುತ್ತದೆ). ಈತ ಒಬ್ಬ ಕುಸ್ತಿ ಪಟು. ನಂತರ ಪತ್ರಕರ್ತ. ಕುಡಿತದ ದಾಸನಾಗಿ ಕುಟುಂಬ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ. ಆದರೂ ಕುಡಿತವನ್ನು ಬಿಡಲಾರ. ಅದರ ಪ್ರತಿಫಲವಾಗಿ ತನ್ನ ಜೀವನವನ್ನು ಕೊನೆಗಳಿಸುಕೊಳ್ಳುವ ನಿರ್ಧಾರಕ್ಕೆ ಬರುತ್ತಾನೆ. ಆದರೆ ಅದಕ್ಕೆ ಸೂಕ್ತ ಸ್ಥಳವಾಗಿ ತನ್ನೂರಾದ ಬಳ್ಳಾರಿಗೆ ಅರ್ಧ ರಾತ್ರಿಯಲ್ಲಿ ಸ್ಕೂಟರ್ ನಲ್ಲಿ ಬೆಂಗಳೂರಿಂದ ಹೊರಡುತ್ತಾನೆ.ಊರು ಮುಟ್ಟುವದರಲ್ಲಿ ಅಪಘಾತ ಆಗುತ್ತೆ. ಗಾಯಗೊಂಡು ಬಂದ ಮಗನಿಗೆ ಶ್ರುಶೂಸೆ, ಉಪಚಾರ ಮಾಡುತ್ತಾಳೆ ಅವನ ಅಮ್ಮ. ಅವಳ ಆರೈಕೆಯಲ್ಲಿ ಚೇತರಿಸುಕೊಳ್ಳುವ ಮಗ, ತನ್ನಲ್ಲಾಗುವ ಬದಲಾವಣೆಗಳನ್ನು ಗಮನಿಸುಕೊಳ್ಳುತ್ತಾನೆ. ಕುಡಿತವಿಲ್ಲದೆ ಕೆಲವು ಗಂಟೆ ಕಳೆಯಲಾರದ ತನಗೆ, ಪೂರ್ತಿ ಒಂದು ದಿನ ಅದರಿಂದ ದೂರವಿರುವುದು ಅರಿವಿಗೆ ಬರುತ್ತದೆ. ಸಾಕಷ್ಟು ವರ್ಷಗಳವರೆಗೆ ಅವಳನ್ನು ಉಪೇಕ್ಷಿಸಿದ ಅವನಿಗೆ ನೆನಪುಗಳು ಮರುಕಳಿಸುತ್ತವೆ. ತನ್ನನ್ನು ಓದಿಸಲು ಅವಳು ಪಟ್ಟ ಕಷ್ಟಗಳ ಅರಿವಾಗುತ್ತದೆ. ಇನ್ನು ಹೆಚ್ಚಿನ ಸಮಯ ಅಮ್ಮನೊಂದಿಗೆ ಕಳೆಯಬಯಸುವ ಮಗನನ್ನು ನಿಜ ಜೀವನಕ್ಕೆ ತಳ್ಳುತ್ತಾಳೆ ಅಮ್ಮ. ಏಕೆಂದರೆ ಅವಳು ಸತ್ತು ಈಗಾಗಲೇ ಇಪ್ಪತ್ತು ವರ್ಷಗಳಾಗಿವೆ. ಮರು ದಿನ ಹೊಸ ಜೀವನ ಕಣ್ತೆರೆಯುತ್ತದೆ.
                    
ಈ ಪುಸ್ತಕ ಕುಡುಕನೊಬ್ಬನ ಸ್ವಗತ ಎನ್ನುವಂತೆ ತೋರುತ್ತದೆ. ರವಿ ಬೆಳಗೆರೆಯವರ  'ಖಾಸ್ ಬಾತ್ ' ಅಂಕಣಗಳನ್ನು ಓದಿದವರಿಗೆ ಹೆಚ್ಚು ಹೊಸತು ಕಾಣದಿದ್ದರೂ, ಹೊಸ ಓದುಗರಿಗೆ ಲೇಖಕನೊಬ್ಬನ ಜೀವನದ ಆಳ, ಎಲ್ಲೆಗಳ ಸಂಪೂರ್ಣ ಪರಿಚಯವಾಗಿ ಅಚ್ಚರಿ ಮೂಡಬಹುದು.


ಈ ಕಿರು ಕಾದಂಬರಿ ಸ್ವಲ್ಪ ಕಾಲ್ಪನಿಕ, ಬಹುತೇಕ ನಿಜ ಜೇವನ. ಕುಡಿತ ಎನ್ನುವದು ಮೊದ ಮೊದಲು ಜೀವನದ ಸೋಲುಗಳಿಂದ ವಿಮುಖರಾಗಿಸುವ ಸಾಧನವಾಗಿ, ನಂತರ ಹೆಚ್ಹಿನ ಸೋಲುಗಳಿಗೆ ಕಾರಣವಾಗಿ, ಒಬ್ಬರ ಜೀವನವನ್ನು ಹೇಗೆ ಹಂತ ಹಂತವಾಗಿ ಅಧಪಥನಕ್ಕೆ ತಳ್ಳುತ್ತದೆ ಎನ್ನುವದನ್ನು ಎಳೆ, ಎಳೆಯಾಗಿ ಬಿಚ್ಚಿಡುವದರಲ್ಲಿ ಲೇಖಕರು ಸಂಪೂರ್ಣ ಯಶಸ್ವಿಯಾಗಿದ್ದಾರೆ. ಆದರೆ ಇದಕ್ಕೂ ಹೆಚ್ಚಿನ ಉದ್ದೇಶ ಲೇಖಕರದ್ದು. ಈ ಖಾಯಿಲೆಗೆ ಮದ್ದು ಕೊಡಬಲ್ಲ ಎಕ್ಯಕ ಜೀವವೆಂದರೆ ಅಮ್ಮ. ಅವಳು ಎಲ್ಲ ದುಃಖವನ್ನು ಮರೆಸಬಲ್ಲಳು. ಎಲ್ಲ ತಪ್ಪುಗಳನ್ನು ಮನ್ನಿಸಬಲ್ಲಳು. ಒಬ್ಬಂಟಿ ಎಂದುಕೊಳ್ಳುವರ  ಜೀವನಕ್ಕೆ ಆಸರೆಯಾಗಿ, ಕುಡಿತದ ತೆಕ್ಕೆಯಿಂದ ಹೊರ ತರಬಲ್ಲಳು. ಇದು ಈ ಪುಸ್ತಕದ ಸಂದೇಶ. 

No comments:

Post a Comment