Friday, June 19, 2015

ಲೈಫು ಇಷ್ಟೇನೇ !

"ಹಿಂದಿನ ಜನ್ಮದ ರಹಸ್ಯ ತಿಳ್ಕೋ,
ಮುಂದಿನ ಜನ್ಮದ ಭವಿಷ್ಯ ತಿಳ್ಕೋ,
ಈಗಿನ ಜನ್ಮ ಹಾಳಾಗಿ ಹೋಗ್ಲಿ,  ಲೈಫು ಇಷ್ಟೇನೇ !"

ಮನುಷ್ಯನ ಮೂರ್ಖತನವನ್ನು ತಿಳಿ ಹಾಸ್ಯವನ್ನಾಗಿಸಿ ಯೋಗರಾಜ ಭಟ್ಟರು ರಚಿಸಿದ ಈ ಗೀತೆ ಜನಪ್ರಿಯವಾಯಿತು. ಅಂದರೆ ಜನರಿಗೆ ಈ ವಿಷಯ ಗೊತ್ತು, ತಮ್ಮ ಈ ಜೀವನದ ಸಮಸ್ಯೆಗಳಿಗೆ ಈ ಜನ್ಮದಲ್ಲೇ ಪರಿಹಾರ ಕಂಡುಕೊಳ್ಳುವುದು ಯೊಗ್ಯ. ಆದರೇನು ಮಾಡುವುದು ಸ್ವಾಮಿ, ಎಲ್ಲ ಪ್ರಯತ್ನಗಳಿಗೂ ತಕ್ಕ ಪ್ರತಿಫ಼ಲ ಸಿಗಬೇಕಲ್ಲ? ಎಲ್ಲ ದಾರಿಗಳನ್ನು ತಡಕಾಡಿ, ನಿರಾಶೆಯ ಕಾರ್ಮೋಡ ಬೆನ್ನು ಬಿಡದಿದ್ದಾಗ, ಕೆಲವರು 'ಹಣೆ ಬರಹ' ಅಂದುಕೊಂಡು ಸುಮ್ಮನಾಗುತ್ತಾರೆ. ಇನ್ನು ಕೆಲವರು 'ಪ್ರಯತ್ನ ನಮ್ಮದು, ಪ್ರತಿಫ಼ಲ ದೇವರ ಇಚ್ಛೆ' ಎಂದು ಭಗವದ್ಗೀತೆಯ ಸಹಾಯ ಪಡೆಯುತ್ತಾರೆ. ಆದರೆ ಸ್ವಲ್ಪ ಜನ (ಅಥವಾ ಸಾಕಷ್ಟು ಜನ) ಛಲದಂಕ ಮಲ್ಲರು. ಅವರು  ಈಗಿನ ಸಮಸ್ಯೆಗಳಿಗೆ ಮೂಲ ತಮ್ಮ ಹಿಂದಿನ ಜನ್ಮಗಳಲ್ಲಿ ಇದ್ದಿರಬಹುದೆಂದು, ಅವುಗಳನ್ನು ಜಾಲಾಡಿದರೆ ಸುಳಿವು ದೊರಕಬಹುದೆಂದು ಹೊಸ ಪ್ರಯತ್ನಗಳಿಗೆ ಇಳಿಯುತ್ತಾರೆ. ಇವರನ್ನು ಮೀರಿಸುವ ಸಂಖ್ಯೆ, ಜ್ಯೋತಿಷ್ಯ ನಂಬುವವರದ್ದು. ಯಾವ ಗ್ರಹಗಳು ಯಾವ ದಿನಗಳಲ್ಲಿ ತಮಗೆ ಶುಭಯೋಗ ತರಬಹುದು ಎಂಬುದರ ಲೆಕ್ಕಾಚಾರ ಇವರಿಗೆ ಬಹು ಪ್ರಿಯವಾದದ್ದು.

ಸಮ ಚಿತ್ತರನ್ನು, ಯೋಗಿಗಳನ್ನು, ಸಾಧು-ಸಂತರನ್ನು, ಫಕೀರರನ್ನು ಗಮನಿಸಿ ನೋಡಿ. ಅವರು ಈ ಚಿಂತೆಯಿಂದ ಮುಕ್ತರಾಗಿರುತ್ತಾರೆ. ಅವರಿಗೆ ಇದಾವುದು ಆಸಕ್ತಿ ಹುಟ್ಟಿಸುವುದಿಲ್ಲ. ಇದೆಲ್ಲ ನಮಗೆ, ಲೌಕಿಕದಲ್ಲಿ ಬದುಕುವವರಿಗೆ ಮಾತ್ರ. ಪುನರ್ಜನ್ಮದಲ್ಲಿ ನಂಬಿಕೆ ಇದ್ದರೆ, ನಾವೇಕೆ ಈ ಜನ್ಮದಲ್ಲಿ ನಮ್ಮ ಸಂಪತ್ತನ್ನು ಸಂಪೂರ್ಣ ಪುಣ್ಯ ಕಾರ್ಯಗಳಿಗೆ ವಿನಿಯೋಗಿಸುವದಿಲ್ಲ? ಮುಂದಿನ ಜನ್ಮ ಯಾರು ಕಂಡವರು ಸ್ವಾಮಿ? ನೋಡಿ. ಇವೇ ನಮ್ಮಲ್ಲಿಯ ವಿರೋಧಾಭಾಸಗಳು. ನಮಗೆ ಹಿತಕರವಲ್ಲದ್ದು ನಮಗೆ ಬೇಡ. ನಮಗೆ ತೊಂದರೆ ಇದೆಯೋ, ಗ್ರಹಬಲಗಳನ್ನು ಪರೀಕ್ಷಿಸಬೇಕು. ಸಮಸ್ಯೆ ಇದ್ದವರು ಮಾತ್ರ ಇದರ ಮೊರೆ ಹೋಗುತ್ತಾರೆ ಎಂದೇನಿಲ್ಲ. ಉಜ್ವಲ ಭವಿಷ್ಯದ ಕನಸು ಕಟ್ಟಿಕೊಡುವ ಜ್ಯೋತಿಷ್ಯ ಯಾರಿಗೆ ಬೇಡ? ಒಟ್ಟಿನಲ್ಲಿ, ಇದರ ಜಂಜಾಟದಿಂದ ನಮಗೆ ಮುಕ್ತಿಯಿಲ್ಲ ಎಂದಾಯಿತು. ನಮಗೆ ಗೊತ್ತು. ಈ ಪ್ರದಕ್ಷಿಣೆಯಿಂದ ನಾವು ಹೊರಗೆ ಬರಲಾರೆವು. ಇದರಲ್ಲೇ  ಜೀವನ ಸವೆಸುತ್ತ ಖುಷಿಯಿಂದ ಹಾಡುತ್ತೇವೆ 'ಲೈಫು ಇಷ್ಟೇನೇ !'

ಪುರಾಣ, ವೇದಾಂತಗಳ ಪ್ರಕಾರ 'ಮೋಕ್ಷ ಎಂದರೆ, ಹುಟ್ಟು-ಸಾವಿನ ಸರಣಿಯಿಂದ ಹೊರ ಬರುವುದು. ಇದನ್ನು ನಾನು ಅರ್ಥ ಮಾಡಿಕೊಂಡ ರೀತಿ, ಈ ಜೀವನದಲ್ಲಿ ಹಳೆಯ ನೋವು ಮತ್ತು ಭವಿಷ್ಯದ ಆಸೆಗಳಿಂದ ವಿಮುಕ್ತರಾಗಿ ಬದುಕುವುದು. ಇದನ್ನು ಹೇಳಿದ ಮಾತ್ರಕ್ಕೆ ನಾನು ಹಾಗೆ ಬದುಕುತ್ತೇನೆ ಎಂದುಕೊಳ್ಳಬೇಡಿ. ನಾನು ನಿಮ್ಮ ಹಾಗೆ. ಅದಕ್ಕೆನೇ  'ಲೈಫು ಇಷ್ಟೇನೇ !' ನನ್ನ ಇಷ್ಟದ ಹಾಡು.

No comments:

Post a Comment