Friday, August 21, 2015

ಕ್ರಿಯಾಶೀಲತೆ ಪ್ರತಿಯೊಬ್ಬರಲ್ಲಿ ಅಂತರ್ಗತ

ಸೃಷ್ಟಿಯ ಪ್ರಕ್ರಿಯೆಯಲ್ಲಿ ಹಾಗೂ ಕ್ರಿಯಾಶೀಲತೆಯಲ್ಲಿ ಪ್ರಕೃತಿ ಮಾತೆಯನ್ನು ಮೀರಿಸುವರಾರು? ಹಗಲು-ರಾತ್ರಿ, ಹುಟ್ಟು-ಸಾವುಗಳ ಸರಣಿಯನ್ನು ಮುಂದುವರೆಸುಕೊಂಡು ಹೋಗುವುದರ ಜೊತೆಗೆ ತರ ತರಹದ ಹೂವು ಅರಳಿಸಿ, ಕಾಮನಬಿಲ್ಲು  ಮೂಡಿಸಿ, ಏಕತಾನತೆಯಲ್ಲೂ ವೈವಿಧ್ಯತೆಯನ್ನು ಸೃಷ್ಟಿಸುವ ಪ್ರಕೃತಿ ಮಾತೆ ತನ್ನ  ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ತುಂಬಿಯೇ ಜೀವ ಸ್ಪರ್ಶ ಕೊಡುತ್ತಾಳೆ. ಇದನ್ನು ವೈಜ್ಞಾನಿಕ ದೃಷ್ಟಿಯಿಂದ ಹೇಳುವುದಾದರೆ, ಸೂರ್ಯನಿಂದ ಸಿಡಿದು ಹೋದ ತುಂಡು ಭೂಮಿಯಾಯ್ತು. ಭೂಮಿಯ ಸಂಪನ್ಮೂಲಗಳಿಂದ ಜೀವ ತಳೆದದ್ದು ಎಲ್ಲಾ ಭೂವಾಸಿಗಳು - ಏಕ ಕೋಶ ಜೀವಿಯಾದ ಅಮೀಬದಿಂದ ಸಂಕೀರ್ಣ ದೇಹ ಹೊಂದಿರುವ ಮನುಜನವರೆಗೆ. ಹಾಗಾಗಿ ಸೃಷ್ಟಿಯ ಪ್ರಕ್ರಿಯೆಯನ್ನು ಜೀವಿಗಳು ಪ್ರಕೃತಿಯ ಜೊತೆಗೆ ಮುಂದುವರೆಸುಕೊಂಡು ಹೋಗಲು ಸಾಧ್ಯವಾಯ್ತು. ಪುರಾಣಗಳನ್ನು ಆಧರಿಸಿ ಹೇಳುವುದಾದರೆ, ಬ್ರಹ್ಮ ತಾನು ಸೃಷ್ಟಿಸಿದ ಬ್ರಹ್ಮಾಂಡದ ಅಣು ಅಣುವಿನಲ್ಲೂ ಪ್ರತಿರೂಪವಾಗಿದ್ದಾನೆ (ಅಹಂ ಬ್ರಹ್ಮಾಸ್ಮಿ). 

ಹೇಳುವ ರೀತಿ ಬೇರೆ ಬೇರೆಯಾದರೂ ವಿಷಯ ಒಂದೇ. ಜೀವ ಸೃಷ್ಟಿಯ ಜೊತೆಗೆ ಹೊಸತನ್ನು ಸೃಷ್ಟಿಸುವ ಕ್ರಿಯಾಶೀಲತೆ ಪ್ರತಿಯೊಬ್ಬರಲ್ಲಿ ಅಂತರ್ಗತ. ಕ್ರಿಯಾಶೀಲತೆಯನ್ನು ಅಭಿವ್ಯಕ್ತಿಗೊಳಿಸುವ ಮಾರ್ಗ ಮತ್ತು ಸ್ತರಗಳು ಬೇರೆಯಾಗಬಹುದು. ಆದರೆ ಕ್ರಿಯಾಶೀಲತೆಯೇ ಇಲ್ಲದ ಜೀವಿ ಜನ್ಮ ತಾಳಿಲ್ಲ. ಕ್ರಿಯಾಶೀಲತೆ ಪ್ರಕೃತಿಯಷ್ಟೇ ಸಹಜ.

ನೀವು ಯಾವುದಾದರನ್ನು ಹೊಸತಾಗಿ ಕಲಿಯುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳಿ. ಅದು ನಿಮ್ಮಲ್ಲಿ ಉತ್ಸಾಹ ಮೂಡಿಸುತ್ತಿತ್ತು. ನೀವು ಕ್ರಿಯಾಶೀಲರಾಗಿದ್ರಿ. ಆದರೆ ಅದೇ ಸಾಕಷ್ಟು ಸಲ ಪುನರಾವರ್ತನೆಯಾದ ಮೇಲೆ ಅದು ಕೆಲಸವಾಗಿ ಪರಿವರ್ತನೆಯಾಯ್ತು. ಉದಾಹರಣೆಗೆ, ವಾಹನ ಓಡಿಸುವುದು ಕಲಿಯುವುದು ನಿಮಗೆ ಆರಂಭದಲ್ಲಿ ಉತ್ಸಾಹ ತುಂಬುತ್ತಿತ್ತು. ಆದರೆ ಅದನ್ನೇ ಕರ್ತವ್ಯ, ಜೀವನೋಪಾಯ ಮಾಡಿಕೊಂಡ ವಾಹನ ಚಾಲಕನಿಗೆ ಅದರಲ್ಲಿ ಕ್ರೀಯಾಶೀಲತೆ ಕಾಣದೇ ಹೋಗಬಹುದು. ಅದೇ ರೀತಿ ವಿಚಾರ ಮಾಡಿದರೆ, ಒಬ್ಬ ಬರಹಗಾರ ಜೀವನ ಪೂರ್ತಿ ಬರೆಯುತ್ತಾನೆ. ಅದನ್ನೇ ಪ್ರತಿ ದಿನ ಮಾಡುತ್ತಾನೆ. ಅದು ಮಾತ್ರ ಕ್ರೀಯಾಶೀಲತೆ ಆಗಲು ಹೇಗೆ ಸಾಧ್ಯ? ಒಬ್ಬ ಗೃಹಿಣಿಯನ್ನು ಗಮನಿಸಿ ನೋಡಿ. ಆಕೆಯ ಮನೆಯ ಮುಂದಿನ ರಂಗೋಲಿ ಪ್ರತಿ ದಿನವು ವಿಭಿನ್ನ. ಕಲಿತು ಪ್ರಯೋಗಿಸುವ ಹೊಸ ರುಚಿ, ತನ್ನ ಮಕ್ಕಳಿಗೆ ಕಟ್ಟುವ ವಿಧ ವಿಧವಾದ ಜುಟ್ಟುಗಳು ಆಕೆಯ ಕ್ರಿಯಾಶೀಲತೆಯ ಕನ್ನಡಿಯಲ್ಲದೇ ಇನ್ನೇನು?

ಏಕತಾನತೆ ಪ್ರತೀ ಕೆಲಸದಲ್ಲಿದೆ. ಹಾಗೆ ನೋಡಿದರೆ ಏಕತಾನತೆಗೇ ಹೆಚ್ಚಿನ ಬೆಲೆ. ಬೇರೆ ಬೇರೆ ವೇಳೆಗೆ ಬರುವ ಬಸ್ಸು ಕ್ರಿಯಾಶೀಲ ಎನ್ನಿಸಿಕೊಳ್ಳುವುದಿಲ್ಲ. ರೈಲು ಯಾವಾಗಲು ಚುಕ್ಕು-ಬುಕ್ಕು ಅನ್ನದೇ ಬೇರೆ ಬೇರೆ ಶಬ್ದ ಹೊರಡಿಸಿದರೆ ನೀವು ಬೆಚ್ಚಿ ಬಿದ್ದೀರಿ. ಕ್ಷಣ ಕ್ಷಣಕ್ಕೆ ಮನಸ್ಸು ಬದಲಾಯಿಸುವ ಬೆಕ್ಕು, ನಾಯಿಯಂತೆ ನಂಬುಗೆಯ ಪ್ರಾಣಿ ಎನ್ನಿಸಿಕೊಳ್ಳುವುದಿಲ್ಲಕ್ರಿಯಾಶೀಲತೆ ತರುವ ಬದಲಾವಣೆ ಯಾವಾಗಲೂ ಹಿತ ತರದೇ, ಫಜೀತಿಗೂ ಈಡು ಮಾಡಬಹುದು. ತುಂಬಾ ಹೊಸ ಹೊಸ ಪ್ರಯೋಗಗಳನ್ನು ಮಾಡುವ ವ್ಯಕ್ತಿ ಶ್ರೀಮಂತನಾಗಲಾರ. ಹಣ ಉಳಿಸಿಕೊಳ್ಳಲು, ಬೆಳೆಸಲು ಕೆಲವೇ ದಾರಿಗಳಿವೆ. ಅವುಗಳನ್ನು ಮೀರಿ ಮಾಡುವ ಹೊಸ ಪ್ರಯೋಗ ಹಣ ಕಳೆದು ಕೊಳ್ಳುವ ಸುಲಭ ಮಾರ್ಗಗಳಾಗಬಹುದು. ಯಾರೂ ನಡೆಯದ ದಾರಿಯಲ್ಲಿರುವ ಅವಘಡಗಳನ್ನು ಕಂಡವರಾರು? ಹೊಸ ಪ್ರಯೋಗಗಳಲ್ಲಿ ಕ್ರಿಯಾಶೀಲತೆ ಇರಬಹುದು ಆದರೆ ಜೊತೆಗೆ ಹೊಸ ಸಮಸ್ಯೆಗಳು ಉದ್ಭವವಾಗಬಹುದು. ತುಂಬಾ ಕ್ರಿಯಾಶೀಲರಾಗಿರುವ ವ್ಯಕ್ತಿಗಳನ್ನು ಗಮನಿಸಿ ನೋಡಿ. ಅವರು ಕಲಾ ಪ್ರಪಂಚವನ್ನೇ ಆಳುತ್ತಿರಬಹುದು. ಆದರೆ ಅವರ ವೈಯಕ್ತಿಕ ಜೀವನ ತುಂಬಾ ಅಸ್ತ-ವ್ಯಸ್ತವಾಗಿದ್ದಿರಬಹುದು. ಊರಿಗೆ ದೊರೆಯಾದರೂ ಮನಗೆ ಮಗನಾಗದೇ ಹೋದ ಎಷ್ಟು ಜನರಿಲ್ಲ

ಕ್ರಿಯಾಶೀಲತೆ ಚೌಕಟ್ಟಿನ ಆಚೆಗೆ ವಿಚಾರ ಮಾಡುವುದನ್ನು ಪ್ರಚೋದಿಸುತ್ತದೆ. ಆದರೆ ಚೌಕಟ್ಟುಗಳನ್ನು ಮೀರಿದ ಬದುಕು ಸಮಾಜಕ್ಕೆ ಅಪಥ್ಯ. ಹೊಸದನ್ನು ಸಂಶೋದಿಸಿದ ವ್ಯಕ್ತಿ ಯಶಸ್ಸು ಕಂಡರೆ ಆತ ಕ್ರಿಯಾಶೀಲತೆಯ ಆದರ್ಶ ಪುರುಷ. ಹೊಸತನ ತರುವಲ್ಲಿ ಆತ ಎಡವಿದರೆ ಬೀಳುವುದು ನೇಪಥ್ಯದ ಪ್ರಪಾತಕ್ಕೆಕ್ರಿಯಾಶೀಲತೆಯನ್ನು ನಾನು ದೂರುತ್ತಿಲ್ಲ. ಬದಲಾಗಿ ಅದು ಯಾವಾಗಲೂ ಒಳ್ಳೆಯದೇ ಮಾಡುತ್ತೆ ಅನ್ನುವ ನಂಬಿಕೆ ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ.

ನಿಮ್ಮಲ್ಲಿ ಅಥವಾ ನಿಮ್ಮ ಕುಟುಂಬದವರಲ್ಲಿ ಕ್ರಿಯಾಶೀಲತೆ ಕಡಿಮೆ ಎನಿಸಿದರೆ ನೆನಪಿಡಿ ಅದು ಎಲ್ಲರಲ್ಲಿ ಅಂತರ್ಗತ. ಅದನ್ನು ಸಾವಕಾಶವಾಗಿ ಹೊರಗೆಳೆದು ಪೋಷಿಸಬಹುದು. ಅದಕ್ಕಾಗಿ ನೀವು ದುಡ್ಡು ಖರ್ಚು ಮಾಡಬೇಕಾಗಿಲ್ಲ. ಬದಲಾಗಿ ಪ್ರಕೃತಿಯ ಮಡಿಲಲ್ಲಿ ಬೆರೆತು ಹೋಗಬೇಕುಪ್ರಕೃತಿಯ ವೈವಿಧ್ಯ ನಿಮ್ಮ ಮನದ ಹೂವನ್ನೂ ಅರಳಿಸುತ್ತದೆ. ಹೊಸದನ್ನು ಸೃಷ್ಟಿಸುವ ಕಲೆ ನಿಮಗೆ ಒಲಿದು ಬರುತ್ತೆ. ಲೌಕಿಕ ಜೀವನಕ್ಕಿಂತ ಮಿಗಿಲಾದ ವರ್ಣಮಯ ಬದುಕು ನಿಮ್ಮದಾಗಬಹುದು

ಅಂತಹ ಯಾವ ಪ್ರಯತ್ನಕ್ಕೂ ನಿಮ್ಮ ಮನ ಬಗ್ಗದೋ, ನೀವು ಚಿಂತಿಸಬೇಕಾಗಿಲ್ಲ. ಚಿಂತಿಸಿ ಪ್ರಯೋಜನವೂ ಇಲ್ಲಕ್ರಿಯಾಶೀಲತೆ ತರುವ ಆನಂದ ನೀವು ಕಳೆದುಕೊಳ್ಳಬಹುದು ಹಾಗೆಯೇ ಅದು ತರುವ ಸಮಸ್ಯೆಗಳು ನಿಮ್ಮ ಹತ್ತಿರ ಸುಳಿಯದು.

No comments:

Post a Comment