Wednesday, September 21, 2016

ಹಳೇ ಬೈಕು, ಗಣೇಶ ಗುಡಿ ಮತ್ತು ರಾಜೇಶ್ ಖನ್ನಾ ಹಾಡು

ನನ್ನ ಬೈಕು ಹಳೆಯದು. ಅದಕ್ಕೆ ಈಗಾಗಲೇ ೧೬ ವರ್ಷಗಳು. ಅದು ನಾನು ಬೆಂಗಳೂರಿಗೆ ಬಂದ ಹೊಸತರಲ್ಲಿ, ಸಂಬಳದಲ್ಲಿ ಉಳಿಸಿದ ಹಣದ ಜೊತೆಗೆ ಸಾಲ ಸೇರಿಸಿ ತೆಗೆದುಕೊಂಡಿದ್ದು. ಈಗಿನ ಪೀಳಿಗೆಯವರು ಕೆಲಸ ಸಿಕ್ಕ ತಕ್ಷಣ, ಒಂದು ಒಳ್ಳೆಯ ಮೊಬೈಲ್ ಖರೀದಿ ಮಾಡಬಹುದು. ಆದರೇ ಆ ಕಾಲಕ್ಕೆ ಮೊಬೈಲ್ ಗಳು ಸಾಮಾನ್ಯ ಜನ ತೆಗೆದುಕೊಳ್ಳುವ ದರದಲ್ಲಿ ಇರಲಿಲ್ಲ. ಸಿಟಿ ಬಸ್ಸಿನ ನೂಕು ನುಗ್ಗಲು ತಪ್ಪಿಸಿಕೊಳ್ಳಲು, ಇತರೆ ಅನುಕೂಲಕ್ಕಾಗಿ ನನಗೆ ಒಂದು ಬೈಕ್ ನ ಅವಶ್ಯಕತೆ ಇತ್ತು. ಆಗ ತೆಗೆದುಕೊಂಡ ಬೈಕ್ ಅದು. ಅದಾದ ಮೇಲೆ ನಾಲ್ಕು ಕಾರುಗಳನ್ನು ಬದಲಾಯಿಸಿದ್ದೇನೆ. ಆದರೆ ಈ ಬೈಕ್ ನ್ನು ಮಾರುವ ವಿಚಾರ ನನಗೆ ಏಕೋ ಬರಲೇ ಇಲ್ಲ. ಅವಾಗಾವಾಗ ತನಗೂ ವಯಸ್ಸಾಗುತ್ತಿದೆ ಸಂದೇಶ ರವಾನಿಸಿದರೂ, ಇನ್ನೂ ನನ್ನ ಹೊತ್ತುಕೊಂಡು ತಿರುಗುತ್ತಿದೆ.

ಮೊದ ಮೊದಲಿಗೆ, ಬೈಕ್ ಇಲ್ಲದೇ ಹೊರಗೆ ಹೊರಡುತ್ತಿದ್ದದ್ದೇ ಇಲ್ಲ. ಊರ ಸುತ್ತ ಮುತ್ತಲಿನ ಚಿಕ್ಕ ಪುಟ್ಟ ಪ್ರವಾಸಗಳಿಗೂ ಅದೇ ಸಂಗಾತಿ. ಆದರೆ ಟ್ರಾಫಿಕ್ ಹೆಚ್ಚಾದ ನಂತರ, ಜೊತೆಗೆ ಆಫೀಸ್ ಗೆ ತಲುಪಲು ಕಂಪನಿ ಬಸ್ಸು ವ್ಯವಸ್ಥೆಯಾದ ನಂತರ, ಬೈಕ್ ನ ಉಪಯೋಗ ಕಡಿಮೆಯಾಯಿತು. ವಾರದ ಕೊನೆಯಲ್ಲಿ ಅಥವಾ ಸಂಜೆ ಎಲ್ಲೋ ಹೋಗಲು ಮಾತ್ರ ಅದರ ಬಳಕೆ ಆಗುತ್ತಿತ್ತು. ಆದರೆ ಅದಕ್ಕೆ ಸವತಿ ಎನ್ನುವಂತೆ ಬಂದಿದ್ದು ನಾನು ತೆಗೆದುಕೊಂಡ ಕಾರು. ನಾಲ್ಕು ಗಾಲಿಯ, ಐದು ಜನರನ್ನು ಹೊತ್ತು ಒಯ್ಯುವ, ಮಳೆ-ಗಾಳಿಯಿಂದ ರಕ್ಷಣೆ ನೀಡುವ ಕಾರಿಗೂ ಬೈಕ್ ಗೂ ಎಲ್ಲಿಯ ಹೋಲಿಕೆ ಮತ್ತು ಸಾಮ್ಯತೆ? ತನಗೆ ಸಿಗುತ್ತಿದ್ದ ಪ್ರಾತಿನಿಧ್ಯ ಕಾರಿಗೆ ಬದಲಾಗಿರುವುದನ್ನು ಕಂಡೂ ಕಾಣದಂತೆ, ಮನೆ ಕಂಪೌಂಡ್ ಒಳಗೆ ಸುಮ್ಮನೆ ನಿಂತಿರುತ್ತಿತ್ತು. ಆದರೂ ಯಾವಾಗಲೋ ತೆಗೆದಾಗ ಖುಷಿಯಿಂದ ಗುರುಗುಡುತ್ತಾ, 'ನಡಿ ಹೋಗೋಣ' ಎಂದು ನೆಗೆಯುತ್ತಿತ್ತು. ವರ್ಷಕ್ಕೆ ಒಂದೆರಡು ಸಲ ಸರ್ವಿಸ್ ಮಾಡಿಸಿಕೊಂಡು, ಯಾವ ಹೊತ್ತಿನಲ್ಲೂ, ಯಾವ ಪಯಣಕ್ಕೂ ತಾನು ತಯ್ಯಾರು ಎನ್ನುವ ಸ್ಥಿತಿಯಲ್ಲಿ ಇತ್ತು. ಆ ನಂಬಿಕೆಯ ಗೆಳೆಯನನ್ನು ಮೂಲೆ ಗುಂಪು ಮಾಡಿದ್ದು ನಾನೇ ಆದರೂ, ಪ್ರತಿ ಅಮವ್ಯಾಸೆಗೆ ಸಾಧ್ಯವಾಗದಿದ್ದರೂ ಕನಿಷ್ಠ ಆಯುಧ ಪೂಜೆ ದಿನವಾದರೂ ಅದಕ್ಕೆ ಎಣ್ಣೆ-ನೀರು ಸ್ನಾನ ಮಾಡಿಸಿ ಪೂಜೆ ಮಾಡುತ್ತಿದ್ದೆ. ನಂತರ ಅದು ತನಗೆ ಯಾವುದೇ ಕೆಲಸವಿಲ್ಲದೇ ಮತ್ತೆ ತನ್ನ ಜಾಗಕ್ಕೆ ಮರಳಿ ನಿಲ್ಲುತ್ತಿತ್ತು. ತನ್ನ ಬಂಗಾರದ ಯುಗದ ಕಥೆ ಇನ್ನು ಮುಗಿಯುತು ಎಂದು ಅದು ಅಂದುಕೊಳ್ಳುತ್ತಿರುವಾಗಲೇ ನನ್ನ ಸೋದರಳಿಯ ಅದರ ಸವಾರಿ ಆರಂಭಿಸಿದ. ಆಗ ಅದರ ಮೇಲಿನ ಧೂಳು ಹಾರಿ ಹೋಗಿ ಮತ್ತೆ ಲವಲವಿಕೆ ಯಿಂದ ಕಂಗೊಳಿಸತೊಡಗಿತು. ಅದು ಸುಮ್ಮನೆ ಮನೆಯಲ್ಲಿ ನಿಂತಾಗ, ನಾನು ನನ್ನ ಚಿಕ್ಕ ಮಗುವನ್ನು ಅದರ ಸೀಟಿನ ಮೇಲೆ ಕೂಡಿಸುವಾಗ, ಅದರ ಕನ್ನಡಿಯಲ್ಲಿ ನನ್ನ ಪ್ರತಿಬಿಂಬ ಕಾಣಿಸುತ್ತಿತ್ತು. ಅದು ಹಳೆ ಸ್ನೇಹಿತನ ಕರೆ ಎಂಬ ಸೂಚನೆ ಸಿಕ್ಕರೂ, ನಾನು ಬೈಕ್ ಉಪಯೋಗ ಸಂಪೂರ್ಣ ಕಡಿಮೆ ಮಾಡಿಬಿಟ್ಟಿದ್ದೆ. ಏನಾದರೂ ಸಾಮಾನು ತರಲು, ಹೊಸದಾಗಿ ಕೊಂಡಿದ್ದ ನನ್ನ ಪತ್ನಿಯ ಸ್ಕೂಟರ್ ಅನುಕೂಲ ಎನ್ನಿಸುತ್ತಿತ್ತು. ಹೀಗೆ ನನ್ನ ಅದರ ಭಾಂಧವ್ಯ ಉತ್ತಮಗೊಳ್ಳಲೇ ಇಲ್ಲ. ಅದು ಹಾಗೆಯೇ ಸಾಕಷ್ಟು ವರ್ಷಗಳವರೆಗೆ ಮುಂದುವರೆಯಿತು.

ಇನ್ನೇನು ಅದು ಅನಾಥ ಸ್ಥಿತಿ ತಲುಪಿತು ಎನ್ನುವಷ್ಟರಲ್ಲಿ, ಮತ್ತೆ ಅದರ ಮತ್ತು ನನ್ನ ಕಾಲ ಕೂಡಿ ಬಂತು. ಅಷ್ಟರಲ್ಲಿ ನಾವು ಬೆಂಗಳೂರು ಹೊರ ವಲಯದಲ್ಲಿ ಮನೆ ಕಟ್ಟಿಕೊಂಡು ಆ ಮನೆಯಲ್ಲಿ ವಾಸಕ್ಕೆ ಬಂದೆವು. ಆಫೀಸು ಬಸ್ಸು ನಮ್ಮನ್ನು ಹತ್ತಿಸಿಕೊಳ್ಳುವ ಜಾಗ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರ. ಈ ಪಯಣಕ್ಕೆ ಮೊದಲು ಡ್ರಾಪ್ ತೆಗೆದುಕೊಳ್ಳುತ್ತಿದ್ದೆ. ಆದರೆ ಅದು ಅಷ್ಟು ಪ್ರಾಯೋಗಿಕ ಎನಿಸಲಿಲ್ಲ. ಮತ್ತೆ ನನ್ನ ಬೈಕ್ ಹತ್ತಿ, ಬಸ್ ಸ್ಟಾಪ್ ಹತ್ತಿರ ಎಲ್ಲಾದರೂ ಅದನ್ನು ನಿಲ್ಲಿಸಿ ಬಸ್ಸು ಹತ್ತುವುದು ಉತ್ತಮ ಎನಿಸಿತು. ಬಸ್ ಸ್ಟಾಪ್ ಹತ್ತಿರದ ಗಣೇಶ ಗುಡಿಯ ಸುತ್ತ ಇರುವ ಖಾಲಿ ಜಾಗದಲ್ಲಿ, ಜನ ತಮ್ಮ ಬೈಕ್ ನಿಲ್ಲಿಸಿ ಬೇರೆ ಕೆಲಸಗಳಿಗೆ ಹೋಗುವುದನ್ನು ಗಮನಿಸಿದೆ. ಮರು ದಿನವೇ ಬಂತು ಬೈಕ್ ಅಲ್ಲಿಗೆ ನನ್ನ ಹೊತ್ತುಕೊಂಡು. ಬೈಕ್ ಅಲ್ಲಿ ನಿಲ್ಲಿಸಿ ಗಣೇಶನಿಗೆ ವಂದಿಸಿದೆ. ನನ್ನ ಗೆಳೆಯನನ್ನು ನಿನ್ನ ಮಡಿಲಲ್ಲಿ ಬಿಟ್ಟು ಹೋಗುತ್ತಿದ್ದೇನೆ ನಾನು ಸಂಜೆ ಮರಳುವವರೆಗೂ, ಅದರ ಹೊಣೆ ನಿನ್ನದು ಎಂದು ಆತನಿಗೇ ಜವಾಬ್ದಾರಿ ಹೊರಿಸಿದೆ. ಗಣೇಶ ನಿರ್ವಿಕಾರ ಭಾವದಿಂದ ನನ್ನ ನೋಡುತ್ತಿದ್ದ. ಎಷ್ಟೋ ಜನ ಏನೇನೋ ಕೇಳಲು ಬರುತ್ತಾರೆ, ನಿನ್ನ ವಾಹನ ನನ್ನ ಕಣ್ಮುಂದೆ ಇರುವುದು ಯಾವ ಮಹಾ ಎಂದು ಆತನಿಗೆ ಅನ್ನಿಸಿತೋ ಏನೋ, ಆದರೆ ಅದನ್ನೆಲ್ಲ ತೋರಗೊಡದೆ, ಆತ ತನ್ನ ಪ್ರಸನ್ನ ಮುಖದ ಮಂದಹಾಸ ಚಹರೆಯನ್ನು ಬದಲಿಸಲಿಲ್ಲ. ಸಂಜೆಯಾಯಿತು, ಬಸ್ಸಿ ನಿಂದ ಇಳಿದು ಗಣೇಶ ಗುಡಿಯ ಅಂಗಳಕ್ಕೆ ಹೋದೆ. ಸ್ವಲ್ಪವೂ ಕೊಂಕದಂತೆ, ಬೈಕ್ ಅಲ್ಲಿಯೇ ನಿಂತಿತ್ತು. ಗಣೇಶನಿಗೆ ಮತ್ತೊಮ್ಮೆ ವಂದಿಸಿದೆ. ಆತನನ್ನು ಜವಾಬ್ದಾರಿ ಮುಕ್ತಗೊಳಿಸಿ, ಬೈಕ್ ನ್ನು ಮನೆಗೆ ಓಡಿಸಿದೆ. ತಾನು ಮತ್ತೆ ಪ್ರವರ್ಧಮಾನಕ್ಕೆ ಬಂದಿರುವುದು ತನಗೆ ಖುಷಿ ತಂದಿದೆ ಎಂದು ಬೈಕ್ ತಾನು ಮಾಡುವ ಸದ್ದಿನಿಂದಲೇ ತಿಳಿಸಿತು.

ಈ ದಿನಚರಿಯ ಪುನರಾವರ್ತನೆ ಸುಮಾರು ಒಂದು ವರ್ಷದಿಂದ ನಡೆದಿದೆ. ಮನೆಯಿಂದ ಗಣೇಶ ಗುಡಿಯ ಅಂಗಳಕ್ಕೆ, ಗಣೇಶನ ಸುಪರ್ದಿಗೆ ಬೈಕ್ ಬಿಟ್ಟು ಆಫೀಸು ಬಸ್ಸು ಏರುವುದು, ನಂತರ ಸಾಯಂಕಾಲ ಮತ್ತೆ ಗಣೇಶನ ಉಪಕಾರ ಸ್ಮರಣೆ ಮಾಡುತ್ತಾ, ಬೈಕ್ ಹತ್ತಿ ಮನೆಗೆ ಮರಳುವುದು. ಆದರೆ ಒಂದು ಬದಲಾವಣೆ ಎಂದರೆ ಈಗ ಅಲ್ಲಿ ಗಣೇಶನ ಅಂಗಳದಲ್ಲಿ ನನ್ನ ಬೈಕ್ ಗೆ ಜೊತೆಯಾಗಿ ಬಹಳಷ್ಟು ಗಾಡಿಗಳು ನಿಲ್ಲುತ್ತವೆ. ಅವರೆಲ್ಲರೂ ನನ್ನ ಹಾಗೆ ಗಣೇಶನ ಉಪಕಾರ ಸ್ಮರಣೆ ಮಾಡುವವರೇ. ಇನ್ನು ತಿಂಗಳಿಗೊಮ್ಮೆ ಮಾತ್ರ ಪೆಟ್ರೋಲ್ ಕೇಳುವ ನನ್ನ ಬೈಕ್ ಇತ್ತೀಚಿಗೆ ಕೆಲವು ವಿಚಿತ್ರ ಶಬ್ದಗಳನ್ನು ಹೊರಡಿಸತೊಡಗಿದೆ, ಸಾಕಷ್ಟು ದುಡಿದ ಅದರ ಅಂಗಾಂಗಗಳು ಸೋಲುತ್ತಿವೆ. ಕಡಿಮೆ ವೇಗದಲ್ಲಿ ಎಂದಿನಂತೆ ಇದ್ದರೂ, ಸ್ವಲ್ಪ ವೇಗ ಹೆಚ್ಚಾದರೂ ಅದು ತನ್ನ ವಯಸ್ಸಿನ ಹೊರೆಯನ್ನು ಏದುಸಿರಿನ ಮೂಲಕ ತೋರಿಸುತ್ತದೆ. ಇಳಿ ಸಂಜೆಯ ವಯಸ್ಸಿಗೆ ತಲುಪಿರುವ ಆ ನನ್ನ ನಂಬಿಕೆಯ ಗೆಳೆಯ ಮುಳುಗುತ್ತಿರುವ ಸೂರ್ಯನೆಡೆಗೆ ನಡೆಯುತ್ತಿದ್ದಾನೆ. ಮತ್ತು ಹಿಂದಿ 'ಆನಂದ್' ಚಿತ್ರದ ರಾಜೇಶ್ ಖನ್ನಾ ನ ಹಾಡು ನೆನೆಪಿಗೆ ತರುತ್ತಾನೆ. 


'ಕಹಿ ದೂರ್ ಜಬ್ ದಿನ್ ಢಲ್ ಜಾಯೆ
ಸಾಂಜ್ ಕಿ ದುಲ್ಹನ್ ಬದನ್ ಚುರಾಯೇ
ಚುಪ್ ಕೆ ಸೆ ಆಯೆ'

No comments:

Post a Comment