Saturday, September 24, 2016

ವೇದಗಳ ರಹಸ್ಯ

(ಶ್ರೀ ಅರಬಿಂದೋರವರ 'Secret of The Veda' ಪುಸ್ತಕದ  ಮೊದಲ ಪುಟದ ಅನುವಾದ)

ವೇದಗಳಲ್ಲಿ ಏನಾದರೂ ರಹಸ್ಯ ಅಡಗಿದೆಯೇ? ಅದು ಇನ್ನೂ ಗುಪ್ತವಾಗಿ ಉಳಿದಿದೆಯೇ?

ಪ್ರಾಚೀನ ಸಂಸ್ಕೃತಿಯ ಹೃದಯದೊಳಕ್ಕೆ ಇಳಿದು ನೋಡಿದರೆ, ಅಲ್ಲಿ ಯಾವುದೇ ರಹಸ್ಯ ಎಂದಿಗೂ ಇದ್ದಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ವೇದಗಳಲ್ಲಿನ ಶ್ಲೋಕಗಳು ಮತ್ತು ಯಜ್ಞಗಳ ಆಚರಣೆಗಳು, ಪ್ರಕೃತಿಯ ಶಕ್ತಿಗಳಿಗೆ ಹೆಸರಿಟ್ಟು ಸಮರ್ಪಿಸುವ ವಿಧಾನಗಳು ಆಗಿದ್ದವು. ವೇದಗಳು ಹುಟ್ಟಿದಾಗ, ಅಂದಿನ ಸಮಾಜ ಇನ್ನೂ ಪೂರ್ಣ ಪ್ರಮಾಣದ ನಾಗರೀಕತೆಯ ಬದಲಾವಣೆಗೆ ಒಳಪಟ್ಟಿರಲಿಲ್ಲ. ಆದರೆ ಅವುಗಳ ಸುತ್ತ ಬೆಳೆದ ಮೂಢ-ನಂಬಿಕೆ ಮತ್ತು ಕಟ್ಟು ಕಥೆಗಳು ಅಪಾರ. ವೇದಗಳ ಕೊನೆಯಲ್ಲಿ ಬರುವ ಕೆಲವು ಶ್ಲೋಕಗಳಲ್ಲಿ ನಾವು ನೈತಿಕ ಮತ್ತು ಆತ್ಮ ವಿಶ್ಲೇಷಣೆಯ ಭಾವಗಳನ್ನು ಗಮನಿಸಬಹುದು. ಕೆಲವರ ಅಭಿಪ್ರಾಯದ ಪ್ರಕಾರ, ಆ ವಿಚಾರಗಳು, ದ್ರಾವಿಡರಿಂದ ಎರವಲು ಪಡೆದದ್ದು. ಆದರೆ ವೇದಗಳಲ್ಲಿನ ಶ್ಲೋಕಗಳು ದ್ರಾವಿಡರನ್ನು 'ವೇದ-ಶತ್ರುಗಳು' ಎಂದೇ ದೂಷಿಸುತ್ತವೆ. ಆ ವಿಚಾರಗಳ ಮೂಲ ಯಾವುದೇ ಆಗಿರಲಿ, ಆದರೆ ವೇದಾಂತದ ಪ್ರಥಮ ಚಿಂತನೆಯ ಎಳೆಗಳನ್ನು ಆ ಶ್ಲೋಕಗಳಲ್ಲಿ ಗಮನಿಸಬಹುದು. ಆ ವೇದಾಂತದ ಸಿದ್ಧಾಂತಗಳು ಅಂದಿನ ಸಮಾಜ ವೇಗ ಗತಿಯಲ್ಲಿ ನಾಗರೀಕತೆಯ ಬದಲಾವಣೆಗೆ ಒಳಪಟ್ಟಿದನ್ನು ಮತ್ತು ಅದು ವೇದಗಳ ಮೇಲೆ ಪ್ರಭಾವ ಬೀರಿದ್ದನ್ನು ಸೂಚಿಸುತ್ತದೆ. ಅದು ಭಾಷಾ-ಶಾಸ್ತ್ರ, ಪುರಾಣಗಳು ಮತ್ತು ಧರ್ಮಶಾಸ್ತ್ರದ ಅಧ್ಯಯನದ ಮೂಲಕವೂ ಧೃಢ ಪಡುತ್ತದೆ.

ಈ ಪ್ರಾಚೀನ ಸಮಸ್ಯೆಗೆ ಒಂದು ಹೊಸ ನೋಟ ಕೊಡುವುದು ನನ್ನ ಪುಸ್ತಕದ ಉದ್ದೇಶ. ಇದಕ್ಕೆ ಋಣಾತ್ಮಕವಾದ ಮತ್ತು ವಿನಾಶಕಾರಿಯಾದ ಪದ್ದತಿಯನ್ನು ಅನುಸರಿಸದೆ, ಬದಲಿಗೆ ನಿರ್ದಿಷ್ಟವಾದ ಮತ್ತು ರಚನಾತ್ಮಕವಾದ ಅಡಿಪಾಯದ ಮೇಲೆ ಒಂದು ಅಭಿಪ್ರಾಯವನ್ನು ಕಟ್ಟಿ ಕೊಡುವುದಾಗಿದೆ. ಅಲ್ಲದೇ ಪುರಾತನ ಕಾಲದ ವಿಚಾರಗಳ ಮೇಲೆ ಬೆಳಕು ಚೆಲ್ಲಿ ಅವುಗಳನ್ನು ಸಮರ್ಪಕವಾಗಿ ವಿಶ್ಲೇಷಿಸುವುದಾಗಿದೆ.


ಪಾಶ್ಚ್ಯಾತ್ಯ ಪಂಡಿತರು ಮೂಲ ಮತ್ತು ಏಕೈಕ ವೇದ ಎಂದು ಪರಿಗಣಿಸುವ ಋಗ್ವೇದದಲ್ಲಿ ಇರುವ ಕೆಲವು ಶ್ಲೋಕಗಳು ಮತ್ತು ಅವುಗಳು ಉಪಯೋಗಿಸುವ ಪ್ರಾಚೀನವಾದಂತ ಭಾಷೆ, ಪದ-ಪುಂಜಗಳು, ಸಮರ್ಪಕವಾಗಿ ಪರಿಹರಿಸಲು ಸಾಧ್ಯವಾಗದಂತ ಸಮಸ್ಯೆಗಳನ್ನೂ ತಂದು ಒಡ್ಡುತ್ತವೆ. ಅಲ್ಲಿಯ ಕೆಲವು ಶಬ್ದಗಳು ಮುಂದಿನ ಶ್ಲೋಕಗಳಲ್ಲಿ ಉಪಯೋಗವಾಗದೇ, ಮತ್ತು ನಂತರ ಕಾಲದಲ್ಲಿ ಬೆಳವಣಿಗೆಗೊಂಡ ಭಾಷೆಯಾದ ಸಂಸ್ಕೃತದದಲ್ಲಿನ ಪದದ ಅರ್ಥಗಳಿಗೂ ತಾಳೆಯಾಗದೇ, ಆ ಶಬ್ದಗಳಿಗೆ ಬಹು ಅರ್ಥಗಳಿದ್ದವು ಎನ್ನುವ ಭಾವನೆ ಮೂಡಿಸುತ್ತದೆ. ಹೀಗಾಗಿ ಪ್ರತಿಯೊಬ್ಬ ಓದುಗನಿಗೂ, ಅವನ ಅನುಭವ ಹಾಗೂ ಭಾಷಾ ಸಾಮರ್ಥ್ಯದ ಅನುಗುಣವಾಗಿ, ಬೇರೆ ಬೇರೆ ರೀತಿಯಲ್ಲಿ ಆ ಶ್ಲೋಕದ ಮತ್ತು ವೇದದ ಅರ್ಥ ಮಾಡಿಸುವ ಸಂಕೀರ್ಣ ಪರಿಸ್ಥಿತಿ ನಿರ್ಮಾಣ ಮಾಡುತ್ತವೆ. ವೇದಗಳು ಹುಟ್ಟಿ ಸಾವಿರಾರು ವರ್ಷಗಳ ನಂತರದ ಕಾಲ ಘಟ್ಟದಲ್ಲಿ ಅವುಗಳನ್ನು ಅರ್ಥ ಮಾಡಿಕೊಳ್ಳುವ ಮೂರು ಗಮನಾರ್ಹ ಪ್ರಯತ್ನಗಳಾಗಿವೆ. ಅಂತ ಮೊದಲನೇ ಪ್ರಯತ್ನ ಆಗಿದ್ದು ಉಪನಿಷತ್ತು ಮತ್ತು ಬ್ರಾಹ್ಮಣ ಶಾಸ್ತ್ರಗಳಿಂದ. ಈ ಪ್ರಯತ್ನ ವೇದ ನಂತರದ ಕಾಲದಲ್ಲಿ ಆದರೆ ಇನ್ನೂ ಪುರಾತನ ಎನ್ನಬಹುದಾದ ಕಾಲಘಟ್ಟದಲ್ಲಿ ಆಗಿದ್ದು ಮತ್ತು ಆ ಪ್ರಯತ್ನ ಪೂರ್ಣ ಪ್ರಮಾಣದ್ದು ಆಗಿರದೆ ವೇದಗಳ ಕೆಲವು ಭಾಗಗಳನ್ನು ಮಾತ್ರ ಒಳಗೊಂಡಿದೆ. ನಂತರ ವೇದಗಳ ಸಂಪೂರ್ಣ ವ್ಯಾಖ್ಯಾನ ಮತ್ತು ಅರ್ಥ ವಿವರಣೆ ಮಾಡಿದ್ದು ಭಾರತೀಯ ವಿದ್ವಾಂಸನಾದ ಸಾಯಣ. ಇತ್ತೀಚಿನ ಪ್ರಯತ್ನ ಯುರೋಪ್ ಮೂಲದ ಹಲವಾರು ವಿದ್ವಾಂಸರ ಶ್ರಮದ ಫಲ. ಆದರೆ ಶ್ಲೋಕದಲ್ಲಿನ ಶಬ್ದಗಳು ಸಂಧರ್ಭಕ್ಕಾನುಸಾರವಾಗಿ ಬೇರೆ ಬೇರೆ ಅರ್ಥ ಹೊಮ್ಮಿಸುವುದರಿಂದ, ಅವುಗಳ ಸಾಲು ಸಾಲಿನ ವಿವರಣೆ ಆ ಪ್ರಯತ್ನಗಳಲ್ಲಿ ಬೇರೆ ಬೇರೆಯಾಗಿ ಮೂಡಿ ಬರುತ್ತವೆ. ಕೆಲವು ಶಬ್ದಗಳ ಗ್ರಹಿಕೆ ಸಾಧ್ಯವಾಗದಾಗ, ಅವುಗಳ ಅರ್ಥ ನಿರೂಪಣಕಾರನ ಕಲ್ಪನಾ ಶಕ್ತಿಯ ಉಪಯೋಗ ಪಡೆಯುತ್ತವೆ.

ಹೀಗೆ ವೇದಗಳ ಅರ್ಥ ಗ್ರಹಿಕೆ ಅಸ್ಪಷ್ಟವಾಗಿದ್ದರೂ, ಧರ್ಮ ಮತ್ತು ಸಾಹಿತ್ಯದ ಇತಿಹಾಸಗಳಲ್ಲಿ  ಅವುಗಳಿಗೆ ಒಂದು ವೈಭವದ ಸ್ಥಾನ ದೊರಕಿದೆ. ಅಗಾಧವಾದ ಧರ್ಮಗಳಿಗೆ ಮತ್ತು ಆಳವಾದ ಆಧ್ಯಾತ್ಮ ಮತ್ತು ತತ್ವ ಶಾಸ್ತ್ರಗಳಿಗೆ ವೇದಗಳು ಮೂಲ ಎನಿಸಿಕೊಂಡಿವೆ. ಬ್ರಹ್ಮಣ, ಉಪನಿಷತ್ತು, ತಂತ್ರ, ಪುರಾಣ ಅಲ್ಲದೇ ಪ್ರಸಿದ್ಧವಾದ ಸಾಕಷ್ಟು ಋಷಿ-ಮುನಿಗಳ ಬೋಧನೆಗಳಿಗೆ ಪ್ರಮಾಣಿತ ಮೂಲ ಎನಿಸಿಕೊಂಡಿವೆ. ಜ್ಞಾನದ ಅರಿವೇ ವೇದ. ಅದು ಮನುಷ್ಯನ ಗ್ರಹಿಕೆಗೆ ಸಾಧ್ಯವಾದಂತ ಪರಮೊತ್ಕೃಷ್ಟ ಆಧ್ಯಾತ್ಮಿಕ ಸತ್ಯ.

ವೇದಗಳ ನಿಜವಾದ ಪ್ರಭಾವ ಧರ್ಮ ಹಾಗೂ ವೇದಾಂತದ ಮೇಲೆ ಪ್ರಾರಂಭವಾಗಿದ್ದು ಉಪನಿಷತ್ತುಗಳ ಮೂಲಕ. ಹೀಗಾಗಿ ವೇದಗಳು ಲೌಕಿಕ ಅರ್ಥದಿಂದ ವೇದಾಂತದ ಅರ್ಥ ಪಡೆದದ್ದು ಉಪನಿಷತ್ತುಗಳ ಮಹತ್ವ. ಮನುಷ್ಯನ ಮನಸ್ಸು ಹೊಸ ವಿಷಯಗಳನ್ನು ಕಲಿಯುತ್ತ ಜ್ಞಾನವನ್ನು ನವೀಕರಣಗೊಳಿಸುತ್ತ ಸಾಗುತ್ತದೆ. ಅದು ಹಳೆಯ ಅಸಮರ್ಪಕ ವಿಷಯಗಳನ್ನು ಹೊಸ ಆವಿಷ್ಕಾರಗೊಳೊಂದಿಗೆ ಸಮೀಕರಣಗೊಳಿಸುತ್ತ ಜ್ಞಾನವನ್ನು ವಿಸ್ತಾರಗೊಳಿಸುತ್ತದೆ.

 ಋಗ್ವೇದ ಒಂದು ಮಹತ್ವದ ಕೃತಿ. ಅದು ಮಾನವ ಕುಲದಲ್ಲಿ ಆದ ವಿಚಾರ ಶಕ್ತಿಯ ಬೆಳವಣಿಗೆಯನ್ನು ತೋರಿಸುತ್ತದೆ. ಆದರೆ ಆ ಕಾಲದಲ್ಲಿ ಆಧ್ಯಾತ್ಮ ಜ್ಞಾನವನ್ನು ರಹಸ್ಯವಾಗಿಡಲು ಏನು ಕಾರಣಗಳಿದ್ದವು ಎಂದು ಈಗ ಊಹಿಸುವುದು ಕಷ್ಟ. ಆಗಿನ ಯೋಗಿಗಳ ಪ್ರಮುಖ ಉದ್ದೇಶ ಪವಿತ್ರವಾದ ಆತ್ಮ-ಜ್ಞಾನವನ್ನು ಮತ್ತು ದೇವರ ಬಗ್ಗೆ ಸರಿಯಾದ ತಿಳುವಳಿಕೆ ಹೊಂದುವುದು ಆಗಿತ್ತು. ಆದರೆ ಈ ವಿವೇಕ ಸಾಮಾನ್ಯ ಮನುಷ್ಯನಿಗೆ ಅರ್ಥವಾಗದೇ ಹೋಗಬಹುದು ಅಥವಾ ದುರಾತ್ಮರ ಕೈಯಲ್ಲಿ ಇದು ವಿರೂಪಗೊಳ್ಳಬಹುದು ಎನ್ನುವ ಉದ್ದೇಶದಿಂದ ಅವರು ಬಾಹ್ಯ ಪೂಜೆ ಮತ್ತು ವಿಧಿ-ವಿಧಾನಗಳಿಗೆ ಒತ್ತು ಕೊಟ್ಟರು. ಮತ್ತು ತಮ್ಮ ಶ್ಲೋಕಗಳನ್ನು ಕಠಿಣ ಭಾಷೆಯ ಮುಸುಕಿನಲ್ಲಿ, ಆಯ್ದವರಿಗೆ ಅದರಲ್ಲಿ ಅಡಗಿರುವ ಅಧ್ಯಾತ್ಮದ ಅರಿವು ಮೂಡಿಸುವಂತೆ ಉಳಿದವರಿಗೆ ಅದು ಒಂದು ಪೂಜಿಸುವ ಪರಿ ಎನ್ನುವ ಭಾವನೆ ಮೂಡಿಸಿದರು. ವೇದಗಳ ಎಲ್ಲಾ ಶ್ಲೋಕಗಳೂ ಇದನ್ನೇ ಸಾಮಾನ್ಯ ನಿಯಮವನ್ನಾಗಿಸಿಕೊಂಡು ರಚಿತವಾಗಿವೆ.

No comments:

Post a Comment