Wednesday, October 18, 2017

ಕಾಲ ಕೆಟ್ಟೋಯ್ತು ಅನ್ನುವವರಿಗಾಗಿ

'ನಾಲ್ಕಾಣೆಗೆ ಸೇರು ಅಕ್ಕಿ ಬರುವ ಕಾಲ ಇತ್ತು' ಎಂದು ಕಳೆದು ಹೋದ ಗತ ವೈಭವದ ಮೆಲುಕು ಹಾಕುತ್ತ ಲೊಚಗುಡುವ ಜನರನ್ನು ನಾವು ಆಗಾಗ ನೋಡುತ್ತಲೇ ಇರುತ್ತೇವೆ. 'ಹೌದು ಸ್ವಾಮಿ, ಅದೇ ಕಾಲದಲ್ಲಿ ನೀವು ಸೀಮೆ ಎಣ್ಣೆ ಬುಡ್ಡೆ ಉರಿಸುತ್ತಿದ್ದೀರೋ ಅಥವಾ ಕರೆಂಟ್ ಬಲ್ಬ್ ಗಳು ಇದ್ದವೊ?' ಎಂದು ಕೇಳಿ ನೋಡಿ. ಉತ್ತರ ಬರೆದಿದ್ದರೆ, ಇನ್ನು ಒಂದು ಪ್ರಶ್ನೆ, 'ಆಗ ನಿಮ್ಮ ಮನೆ ನಲ್ಲಿಗೆ ನೀರು ಬರುತ್ತಿತ್ತೋ ಅಥವಾ ದೂರದ ಭಾವಿಯಿಂದ ಅಥವಾ ಹಳ್ಳದಿಂದ ಹೊತ್ತು ತರಬೇಕಾಗಿತ್ತೋ?' ಕೇಳಿ ನೋಡಿ. ಅವರ ಮಾತಿನ ಲಹರಿ ತುಂಡಾಗಿ, ನಿಮ್ಮ ಕಡೆಗೆ "ಯಾರಿದು ಶಿವ ಪೂಜೆಯಲ್ಲಿನ ಕರಡಿ?" ಎನ್ನುವಂತೆ ದೃಷ್ಟಿ ಬೀರುತ್ತಾರೆ.


ಹಳೇ ಕಾಲದ ಸವಿ ನೆನಪುಗಳನ್ನು ಮಾತ್ರ ಸ್ಮೃತಿಯಲ್ಲಿ ಇರಿಸಿಕೊಂಡು, ಇಂದಿನ ಕಾಲದ ಜೊತೆಗೆ ಹೋಲಿಕೆ ಮಾಡಿದರೆ 'ಇಂದಿಗಿಂತ ಅಂದೇನೇ ಚೆಂದವೋ ...' ಎನ್ನುವ ಹಾಡು ನೆನಪಾಗಬಹುದು. ಮನುಷ್ಯ ಹಳೆ ನೆನಪುಗಳಲ್ಲಿ ಅಥವಾ ಭವಿಷ್ಯದ ಕನಸುಗಳಲ್ಲಿ ಕಳೆದು ಹೋಗುವುದೇ ಹೆಚ್ಚು. ಹಾಗಾಗಿ ಬೇಕಾದುದದ್ದನ್ನು ಮಾತ್ರ ನೆನಪಿನಲ್ಲಿ ಇಟ್ಟುಕೊಂಡು ಉಳಿದ ಎಲ್ಲ ವಿವರಗಳನ್ನು ನಿರ್ದಾಕ್ಷಿಣ್ಯ ವಾಗಿ ಕಡೆಗಣಿಸಿ ಬೇರೆ ಬೇರೆ ಕಾಲ ಘಟ್ಟಗಳ ತುಲನೆಗೆ ನಿಲ್ಲುತ್ತಾನೆ. ಇದು ಮನುಷ್ಯನ ಸಹಜ ಸ್ವಭಾವವೇ ಎನ್ನಬಹುದು. ಆದರೆ ಭಾವುಕರಾಗಿ ಯೋಚಿಸದೇ, ಸವಿಸ್ತಾರವಾಗಿ ಆಲೋಚಿಸಿದಾಗ, ಇಂದಿನ ಕಾಲವೇ (ಅಕ್ಕಿ ಐವತ್ತು ರೂಪಾಯಿಗೆ ಕೆ.ಜಿ. ಇದ್ದರೂ ಕೂಡ) ಹೆಚ್ಚು ಆರಾಮದಾಯಕ ಎನ್ನಿಸುತ್ತದೆ.


ನಾನು ಹತ್ತನೇ ತರಗತಿ ಮುಗಿಸಿದ ವರ್ಷ (೧೯೯೨), ನನ್ನ ಅಂಕ ಪಟ್ಟಿಯ ನಕಲು (ಜೆರಾಕ್ಸ್) ಮಾಡಿಸಲು ೨೫ ಕಿ.ಮೀ ದೂರದ ಊರಿಗೆ ಹೋಗಿ ಬಂದದ್ದು ನೆನಪಿದೆ. ಈಗ ನನ್ನ ಮನೆಯಲ್ಲಿ ಇರುವ ಪ್ರಿಂಟರ್ ನಲ್ಲಿ, ಕಂಪ್ಯೂಟರ್ ನಲ್ಲಿ ಹಾಕಿಕೊಂಡಿರುವ ಇಮೇಜ್ ಗಳ ಮೂಲಕ ಪ್ರಿಂಟ್ ತೆಗೆಯುತ್ತೇನೆ. ನನ್ನ ಮಗನಿಗೆ ಪೋಸ್ಟ್-ಆಫೀಸ್ ಅಂದರೇನು ಎಂದೇ ಗೊತ್ತಿಲ್ಲ, ಅವನಿಗೆ ವಾಟ್ಸ್-ಆಪ್ ಇದೆ. ಇನ್ನೂ ಸ್ವಲ್ಪ  ಹಿಂದಿನ ಕಾಲಕ್ಕೇ ಹೋಗುವದಾದರೇ, ಸುಮಾರು ೩೦-೩೫ ವರ್ಷಗಳ ಹಿಂದೆ ನಮ್ಮೂರಿನಲ್ಲಿ ಇದ್ದಿದ್ದೇ ಎರಡು ಬೈಕ್ ಗಳು. ಒಂದು ಪೊಲೀಸ್ ಸಬ್-ಇನ್ಸ್ಪೆಕ್ಟರ್ ಅವರದ್ದು ಇನ್ನೊಂದು ನಮ್ಮೂರಿನ ಡಾಕ್ಟರ್ ಅವರದ್ದು. ಈಗ ಪ್ರತಿ ಮನೆಯಲ್ಲಿ ಎರಡು ಬೈಕ್ ಇವೆ. ಪ್ರತಿ ದಿನ ಯಾವುದಾದರೂ ಕೆಲಸಕ್ಕೆ, ಅಥವಾ ಪಕ್ಕದ ಊರಿಗೆ ಅಥವಾ ಹೊಲಕ್ಕೆ ಹೋಗಿ ಬರುವುದು ಇಂದು ಪ್ರಯಾಸದ ಕೆಲಸ ಅಲ್ಲವೇ ಅಲ್ಲ. ಇದು ಪ್ರಗತಿ ಅಲ್ಲವೇ? ಪ್ರತಿ ಮುಂಜಾನೆ ಆರು ಕೊಡ ನೀರು ಹೊತ್ತು ತಂದು, ಬಚ್ಚಲು ಮನೆಯ ಹಂಡೆ ತುಂಬಿಸಿದ ನೆನಪಿರುವ ನನಗೆ, ಇಂದು ನಳ ತಿರುವಿದರೆ ಬರುವ ನೀರು ಸೋಜಿಗ ಎನ್ನಿಸುತ್ತದೆ. ಅಂದು ಇಪ್ಪತ್ತು ರೂಪಾಯಿಗೆ ಒಂದು ವಾರಕ್ಕೆ ಬೇಕಾದಷ್ಟು ತರಕಾರಿ ಸಂತೆಯಿಂದ ಕೊಂಡು ತರಬಹುದಾಗಿತ್ತು ನಿಜ. ಆದರೆ ಕೇವಲ ಅದಷ್ಟೇ ಬದಲಾಗಲಿಲ್ಲವಲ್ಲ. ಹಲವಾರು ಅನುಕೂಲಗಳೂ ಜೊತೆಗೆ ಬಂದವು. ಬದುಕುವ ಶೈಲಿ ಕ್ರಮೇಣ ಬದಲಾಯಿತು. ಅಡುಗೆ ಮಾಡುವಾಗ ಅನ್ನ ಎಲ್ಲಿ ಉಕ್ಕಿತೋ ಎಂದು ನನ್ನ ತಾಯಿ ನಿಗಾ ಇಡುತ್ತಿದ್ದ ಕಾಲ ಹೋಯಿತು. ಇಂದು ಕುಕ್ಕರ್ ಸೀಟಿ ಒಡೆದು ಹೇಳುತ್ತೆ ಅನ್ನ ರೆಡಿ ಎಂದು. ಸರಿ ಈಗ ಹೇಳಿ ಯಾವ ಕಾಲ ಚೆಂದ ಎಂದು.


ಅಂದು ಮೈಯೆಲ್ಲಾ ಕಿವಿ ಆಗಿಸಿ ಕೇಳುವ, ವಾರ್ತಾ ಪ್ರಸಾರ ಅಥವಾ ಪ್ರದೇಶ ಸಮಾಚಾರ ಮಾತ್ರ ಇತ್ತು. ಎಷ್ಟೋ ವಿಷಯಗಳು ಜನರನ್ನು ತಲುಪಲಿಕ್ಕೆ, ಸಾಕಷ್ಟು ಸಮಯ ತಗಲುತ್ತಿತ್ತು. ಇಂದು ಅಂತರ್ಜಾಲದ ಮಹಿಮೆಯಿಂದ ಎಲ್ಲರದರ ಮಾಹಿತಿ ನಿಮ್ಮ ಬೆರಳ ತುದಿಯಲ್ಲಿ. ಮಹಾಭಾರತದ ಯುದ್ಧದ ವಿವರಗಳನ್ನು ಸಂಜಯ ದೂರ ದೃಷ್ಟಿಯಿಂದ ಕಂಡು ಕುರುಡ ಮಹಾರಾಜನಿಗೆ ತಿಳಿಸಿದ ಹಾಗೆ, ಎಲ್ಲಿಯೋ ನಡೆದಿರುವ ಸಂಗತಿಗಳನ್ನು ನಮಗೆ ಇಂದು  'ಫೇಸ್ ಬುಕ್ ಲೈವ್' ವೀರರು ತೋರಿಸಿಕೊಡುತ್ತಾರೆ. ರಾಮಾಯಣದ ಕಾಲದ ಪುಷ್ಪಕ ವಿಮಾನ ಕಲ್ಪನೆಯೋ, ನಿಜವೋ ಗೊತ್ತಿಲ್ಲ. ಆದರೆ ಇಂದು ಜಗತ್ತಿನ ಯಾವ ಮೂಲೆಗೂ ಬೇಕಾದರೂ ನೀವು ಇಪ್ಪತ್ನಾಲ್ಕು ಘಂಟೆಗಳಲ್ಲಿ ವಿಮಾನ ಯಾನದ ಮೂಲಕ ತಲುಪಬಹದು. ಇಂತಹ ಆಧುನಿಕ ಸವಲತ್ತುಗಳು ಹಿಂದೆ ಬದುಕಿದ್ದ ಸಾಧಕ ವ್ಯಕ್ತಿಗಳಿಗೆ ದೊರಕಿದ್ದರೆ, ಅವರ ಸಾಧನೆ ಇನ್ನು ಮಹತ್ತರವಾಗಿರುತ್ತಿತ್ತು ಎನ್ನುವುದು ನನ್ನ ಅನಿಸಿಕೆ. ಎಂಟನೇ ಶತಮಾನದಲ್ಲಿ ಆದಿ ಶಂಕರ ಕೇರಳದಿಂದ ಹಿಮಾಲಯಕ್ಕೆ ನಡಿಗೆಯ ಮೂಲಕ ಹೋಗಲು ತೆಗೆದುಕೊಂಡ ಸಮಯ ಕೆಲವು ವರ್ಷಗಳು. ಇಂದು ಕೇವಲ ಒಂದು ವಾರದಲ್ಲಿ ಚಾರ್-ಧಾಮ್ ಯಾತ್ರೆ ಮಾಡಬಹುದು. ಹಾಗೆಯೇ ಸ್ವಾಮಿ ವಿವೇಕಾನಂದರಿಗೆ ಅವರ ಕಾಲ ಘಟ್ಟದಲ್ಲಿ ಸೋಶಿಯಲ್ ಮೀಡಿಯಾ ನೆರವಿದ್ದಿದ್ದರೆ ಇನ್ನು ಹೆಚ್ಚು ಜನರನ್ನು ಪರಿಣಾಮಕಾರಿಯಾಗಿ ತಲುಪಿರುತ್ತಿದ್ದರು ಎನ್ನುವುದು ನಿಸ್ಸಂದೇಹ. ಈಗ ನಿಮ್ಮ ಅಭಿಪ್ರಾಯ ಏನು - ಯಾವ ಕಾಲ ಚೆಂದ?


ಈ ವರ್ಷ ನಮ್ಮ ಕಡೆಗೆ ಬೆಳೆ ಸರಿಯಾಗಿ ಆಗಲಿಲ್ಲವೋ, ದೂರದ ಬ್ರೆಜಿಲ್ ನಿಂದ ಸಕ್ಕರೆ ಆಮದು ಮಾಡಿಕೊಳ್ಳಬಹುದು. ಹಿಂದೆ ೧೯೪೩ ರಲ್ಲಿ, ಬಂಗಾಳದಲ್ಲಿ ಬರಗಾಲ ಬಿದ್ದಾಗ ಹಸಿವಿನಿಂದ ಸತ್ತವರ ಸಂಖ್ಯೆ ಇಪ್ಪತ್ತು ಲಕ್ಷಕ್ಕೂ ಅಧಿಕ ಎನ್ನುವ ವಿಷಯ ನಿಮಗೆ ಗೊತ್ತೇ? ಇಂದಿನ ಯುದ್ಧಗಳನ್ನು ಬರಿ ಕ್ಷಿಪಣಿಗಳೇ ಮಾಡಿ ಮುಗಿಸುತ್ತವೆ. ಆದರೆ ಭಾರತಕ್ಕೆ ಸ್ವತಂತ್ರ ಬರುವ ಎರಡು ವರ್ಷಗಳ ಹಿಂದೆ ಕೊನೆಗೊಂಡ ಜಗತ್ತಿನ ಎರಡನೇ ಮಹಾ ಯುದ್ಧದಲ್ಲಿ ಮಡಿದವರ ಸಂಖ್ಯೆ ಐದು ಕೋಟಿಗೂ ಹೆಚ್ಚು. ಅದರಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ಜನರನ್ನು ವಿಷಾನಿಲ ತುಂಬಿದ ಕೋಣೆಗಳಿಗೆ ತಳ್ಳಿ ಸಾಯಿಸಿತ್ತು ಹಿಟ್ಲರ್ ನ ಸೇನೆ. ಇಂದಿಗೆ ಭಯೋತ್ಪಾದನೆ ಇದೆ, ಪ್ರಾಕೃತಿಕ ವೈಪರೀತ್ಯಗಳು ಇವೆ. ಆದರೆ ಇಡೀ ಒಂದು ದೇಶದ ನಾಗರಿಕತೆ, ಯುದ್ಧದಿಂದ ಅಥವಾ ಹಸಿವಿನಿಂದ ಸಂಪೂರ್ಣ ಅಳಿದು ಹೋಗುವ ಸಾಧ್ಯತೆ ತುಂಬಾ ಕಡಿಮೆ. ನನ್ನ ಅನಿಸಿಕೆ - ಈಗಿನ ಕಾಲದಲ್ಲಿ ಹುಟ್ಟಿದ್ದಕ್ಕೆ ನೀವು ತುಂಬಾನೇ ಲಕ್ಕಿ.


ಮುಂದುವರೆದ ನಾಗರಿಕತೆ, ಜೀವನ್ಮರಣದ ಪ್ರಶ್ನೆಗೆ ದಿನವೂ ತಲೆ ಕೆಡಿಸಿಕೊಳ್ಳದಂತೆ ವ್ಯವಧಾನ ತಂದು ಕೊಟ್ಟಿದೆ. ಆದರೆ ಬದಲಾದ ಸವಲತ್ತುಗಳೊಡನೆ ನಮ್ಮ ಜೀವನ ಶೈಲಿ ಅನಾರೋಗ್ಯಕರ ರೀತಿಯಲ್ಲಿ ಬದಲಿಸಿ ಕೊಳ್ಳದೆ ಇರುವುದು ನಮಗೆ ಬಿಟ್ಟಿದ್ದು. ನಮಗೆ ಅನ್ನಿಸಿದ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲು ಇರುವ ಅವಕಾಶಗಳು ನಮಗೆ ಹಿಂದಿನ ಯಾವ ಕಾಲಕ್ಕಿಂತಲೂ ಹೆಚ್ಚು.


ಮತ್ತೆ ಯಾರಾದರೂ 'ಕಾಲ ಕೆಟ್ಟೋಯ್ತು' ಎಂದು ನಿಮ ಬಳಿ ಹೇಳಿದರೆ ಗಮನಿಸಿ ನೋಡಿ. ಒಂದು ಅವರಿಗೆ ಇತಿಹಾಸದ ಸೂಕ್ಷ್ಮ ಪರಿಚಯ ಇಲ್ಲ. ಮತ್ತು ಅವರು ವಾಸ್ತವದ ಜೊತೆಗೆ ಹೊಂದಾಣಿಕೆಗೆ ಒಪ್ಪದೇ. ಕಾಲದ ಮುನ್ನುಗ್ಗುವಿಕೆಯಲ್ಲಿ ಕಳೆದು ಹೋದವರು. ಒಂದು ಕ್ಷಣ ಮನಸ್ಸನ್ನು ವಿರುದ್ಧ ದಿಕ್ಕಿಗೆ ಹೊರಳಿಸಿ ನೋಡಿ. ಬರಲಿರುವ ಕಾಲ ಇನ್ನೋನೇ ಚೆಂದ.

No comments:

Post a Comment